For Enquiries Contact us
ಈ ಉಭಯ ವರ್ಗದ ಜನರು ಕರ್ನಾಟಕ, ಮಹಾರಾಷ್ಟ್ರ , ತೆಲುಗು ಪ್ರಾಂತಗಳ ಕೆಲ ಕೆಲವು ಭಾಗಗಳಲ್ಲಿ ವಾಸಿಸುತ್ತಿರುವುದು ಕಂಡು ಬಂದಿದೆ. ಸರ್ವ ಸಾಮಾನ್ಯವಾಗಿ ಇವರೆಲ್ಲರೂ ನೇಯ್ಗೆ ಉದ್ಯೋಗವನ್ನೇ ಮಾಡುವರು. ಇವರ ಜನ ಸಂಖ್ಯೆಯು ಇಷ್ಠೇ ಇರುವುದೆಂದು ನಿಶ್ಚಿತವಾಗಿ ಹೇಳಲಿಕ್ಕೆ ಬರುವಂತಿಲ್ಲ. ಯಾಕೆಂದರೆ, ಹಿಂದಿನ ಖಾನೇ ಸುಮಾರಿ (ಜನಗಣತಿ ) ಕಾಲದಲ್ಲಿ ಇವರಲ್ಲಿ ಕೆಲ ಕೆಲವರು ತಮ್ಮ ಮೂಲ ಜಾತಿಯ ಹೆಸರನ್ನು ಬರೆಸದೆ ತಾವು ಮಾಡುವ ಉದ್ಯೋಗವನ್ನೇ ಮುಂದುಮಾಡಿ ಜೇಡರು, ನೇಕಾರರು, ಮಗ್ಗದವರು ಇತ್ಯಾದಿಯಾಗಿ ಬರೆಸಿರುವರು. ಹಿಂದೂಸ್ಥಾನದಲ್ಲಿ ನೇಕಾರಿಕೆ ಉದ್ಯೋಗವನ್ನು ಇವರೊಬ್ಬರೇ ಮಾಡುವರೆಂತಲ್ಲ ; ದೇವಾಂಗ ಸಾಳಿ ಮುಂತಾದ ಅನೇಕ ಜಾತೀಯ ಜನರೂ ಇದೇ ಕಸಬನ್ನು ಮಾಡುತ್ತಿರುವುದರಿಂದ ಹೀಗೆ ಬರೆಸಿದವರು ಯಾವ ಜಾತಿಯವರೋ ಎಂಬುದನ್ನು ನಿರ್ಧರಿಸಲು ಬಾರದಂತಾಗಿದೆ. ಆದರೂ ಕುರುಹಿನಶೆಟ್ಟಿ ಸಮಾಜದ ಗುರುಗಳೂ ಹಾಗೂ ಕುಲದ ಮಕ್ಕಳೆಂಬವರೂ ತಮ್ಮ ದೇಶ ಸಂಚಾರದ ಅನುಭವದಿಂದ ಹೇಳುವ ಮಾತಿನ ಮೇಲಿಂದ ವಿಚಾರಿಸಿದರೆ ಈ ಜನರ ಸಂಖ್ಯೆಯು ಎರಡು ಮೂರು ಲಕ್ಷಕ್ಕಿಂತಲೂ ಹೆಚ್ಚಾಗಿರಬಹುದೆಂದು ತೋರುವುದು.
ವೀರಶೈವ ಹೀರೆ ಕುರುಹಿನವರಲ್ಲಿ ಮಾತ್ರ ಒಳ ಪಂಗಡಗಳಿಲ್ಲ; ಆದರೆ ನೀಲಕಂಠಸ್ವಾಮಿಗಳೆಂಬ ಕುಲ ಗುರುವಿಗೆ ನಡೆದುಕೊಳ್ಳತಕ್ಕವರೆಂದೂ ಪಂಚಾಚಾರ್ಯ ಜಂಗಮರಿಗೆ ನಡೆದುಕೊಳ್ಳತಕ್ಕವರೆಂದೂ ಎರಡು ಬಣ್ಣಗಳಿದ್ದರೂ ಪರಸ್ಪರ ಊಟ - ಉಪಚಾರ, ಶರೀರ ಸಂಬಂದಿಗಳು ನಿರಾತಂಕವಾಗಿ ನಡೆಯುವುದರಿಂದ ಇವು ಅಷ್ಟೊಂದು ಪ್ರಮುಖ ಭೇದಗಳಾಗಿರುವುದಿಲ್ಲ.
ಅಲಿಂಗಿ ಕುರುಹಿನವರಲ್ಲಿ ಮಾತ್ರ ಒಂಟಿ ಭೂಮದವರು, ಜೋಡ ಭೂಮದವರು, ನೀಲಕಂಠಿಗಳು (ಇವರಿಗೆ ಜಾಣರೆತಂಲೂ ಅನ್ನುವರು) ಎಂಬ ಮೂರು ಪಂಗಡಗಳಿದ್ದು ಇವರಲ್ಲಿ ಪರಸ್ಪರ ಬೀಗತನವಾಗುವುದಿಲ್ಲ. ಒಂಟಿ ಭೂಮ, ಜೋಡ ಭೂಮದವರೆಂಬುವರನ್ನು ಬಳ್ಳಾರಿ, ಕರ್ನೂಲು ಮುಂತಾದ ಕಡೆಗಳಲ್ಲೂ ನೀಲಕಂಠಿಗಳೆಂಬವರನ್ನು ತೆಲುಗು ನಾಡು ಸೋಲಾಪುರ ಈ ಊರುಗಳಲ್ಲಿಯೂ ನೋಡಬಹುದು. ಈ ಭೂಮಗಳ ಗೊಂದಲವು ಅಷ್ಟಿಷ್ಟಲ್ಲ. ಅಪ್ಪಿ ತಪ್ಪಿ ಎಲ್ಲಿಯಾದರು ಈ ಭಿನ್ನ ಪಂಗಡಗಳಲ್ಲಿ ಭೀಗತನವಾಗಿದ್ದರೆ ಊರಿಗೆ ಊರೇ ಎದ್ದು ನಿಂತು ಕಾದಡುವುದು. ಮೈಸೂರು ದೇಶದ ಅಲಿಂಗಿ ಕುರುಹಿನವರಲ್ಲಿ ಮಾತ್ರ ಈ ಭೂಮಗಳ ತಿಕ್ಕಾಟವಿದ್ದಂತೆ ಕಾಣವುದಿಲ್ಲ. ನಮಗೆ ಗೊತ್ತಿದ್ದ ಮೇರೆಗೆ ಮೇಲೆ ಹೇಳಿದ ಮೂರು ಪಂಗಡಗಳ ವಿಷಯವನ್ನು ಬರೆದಿದ್ದೇವೆ. ಹೆಚ್ಚಾಗಿದ್ದರೂ ಇರಬಹುದು. ಆ ಸಂಗತಿ ನಮಗೆ ಈವರೆಗೂ ತಿಳಿದಿಲ್ಲವಷ್ಟೇ.
ಈ ಪ್ರಕಾರ ಕುರುಹಿನವರೆಂಬುವರಲ್ಲಿ ಭೇದಗಳಾಗಿದ್ದರೂ ಯವಾ ಪಂಗಡದವರೂ ತಮ್ಮ ಪೂರ್ವ ಪರಂಪರೆಯ ಗೋತ್ರ ಸೂತ್ರಗಳನ್ನು ಬಿಟ್ಟಿಲ್ಲ. ಕುಲ ಗುರುಗಳನ್ನೂ ಮರೆತಿಲ್ಲ. ಮೈಸೂರು ಸೀಮೆಯವರೇ ಇರಲಿ, ಮೊಗಲಾಯಿ (ನಿಜಾಮ) ನಾಡಿನವರೇ ಇರಲಿ ಇವರ ಜಾತಿಯ ಹೆಸರುಗಳು ನಾಡ ಭೇದದಿಂದ ಬೇರೆ ಬೇರೆಯಾಗಿದ್ದರೂ ಗೋತ್ರಗಳಲ್ಲಿ ಮಾತ್ರ ಎಲ್ಲಿಯೂ ಭಿನ್ನತೆಯಾಗಿರುವುದಿಲ್ಲ. ಎಲ್ಲರೂ ತಮ್ಮ ತಮ್ಮ ಮನೆತನದ ಗೋತ್ರಗಳನ್ನು ಹೇಳಿಕೊಂಡೇ ವಿವಾಹಾದಿಗಳನ್ನು ನೆರೆವೇರಿಸಿಕೊಳ್ಳುತ್ತಾರೆ. ಇವರ ಮೇಲಿಂದ ಇವರು ಎಲ್ಲಿದರೂ ಕುರುಹಿನವರೆಂದು ಗುರ್ತಿಸಬಹುದಾಗಿದೆ. ಈ ಮಹತ್ವವಾದ ಹೆಗ್ಗುರುತ್ತೇ ಭವಿಷ್ಯತ್ಕಾಲದಲ್ಲಿ ಎಲ್ಲರನ್ನೂ ಒಂದು ಗೂಡಿಸಲು ಸಾಧ್ಯವಾಗದು. ಕುರುಹಿನವರಲ್ಲಿ ಈಗ ಉಂಟಾದ ಪಕ್ಷ - ಪಂಗಡಗಳು ಯಾವ ಕಾಲದಲ್ಲಿ ಯಾವ ಕಾರಣಗಳಿಂದ ಆದವು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಒಂದೊಂದು ಪಂಗಡದವರು ಒಂದೊಂದು ವಿಧವಾಗಿ ತಾವೇ ಶ್ರೇಷ್ಠರೆಂದು ಹೇಳಿಕೊಳ್ಳುತ್ತಾ ಇತರರನ್ನು ದೂಷಿಸುವುದುಂಟು. ಇಂಥವವರ ಮಾತಿಗೆ ನಾವು ಬೆಲೆ ಕೊಟ್ಟು ಗುದ್ದಾಡುವುದಕ್ಕಿಂತಲೂ ಸುಮ್ಮನಿದ್ದು ಶಾಂತತೆಯಿಂದ ಮುಂದಿನ ಸುಮಾರ್ಗವನ್ನು ಹುಡುಕುವುದೇ ಲೇಸು.ಇನ್ನು ಕುರುಹಿನವರ ಮೂಲ ಉತ್ಪತಿ ಹೇಗಾಯಿತು ಇವರಿಗೆ ಗೋತ್ರಗಳೆಷ್ಟು, ಮತಾಚಾರವಾವುದು, ಕುಲಸ್ವಾಮಿ ಯಾರು ಎಂಬದನ್ನು ಸ್ವಲ್ಪ ವಿಚಾರಿಸೋಣ. ಈ ವಿಷಯಗಳನ್ನು ಕುರಿತು ಕೆಲ ಕೆಲವು ಗ್ರಂಥಗಳಲ್ಲಿ ಉಲ್ಲೇಖಗಳು ದೊರೆಯುವವಾದರೂ ಅವುಗಳಲ್ಲೆಲ್ಲ ನೀಲಕಂಠ ಪುರಾಣದಲ್ಲಿಯೇ ಈ ಜಾತಿಯ ವರ್ಣನೆಯು ಹೆಚ್ಚಾಗಿರುವುದು ಕಂಡು ಬರುವುದು. ಈ ಪುರಾಣವೇ ತಮ್ಮ ಪವಿತ್ರ ಗ್ರಂಥವೆಂದು ಈಗಲೂ ಕುರುಹಿನವರೆಲ್ಲರೂ ಪೂರ್ಣ ನಂಬಿಕೊಂಡಿದ್ದು ಅದನ್ನು ದೇವರ ಜಗುತಿಯ ಮೇಲಿಟ್ಟು ಪೂಜಿಸುತ್ತಾರೆ, ಈ ಪುರಾಣದ ಕೈ ಬರಹದ ಅನೇಕ ಪ್ರತಿಗಳು ಎಲ್ಲ ಕಡೆಯಲ್ಲೂ ದೊರೆಯುತ್ತವೆ.
ಅನಂತಪುರ ಜಿಲ್ಲೆಯ ಅಮದಾಲು ಗ್ರಾಮ; ಬಳ್ಳಾರಿ ಜಿಲ್ಲೆಯ ಹಿರಿಯಾಳ ಗ್ರಾಮ; ಕೊಡಗು ಪ್ರಾಂತದ ಶನಿವಾರ ಸಂತೆ ಗ್ರಾಮ; ನಿಜಾಂ ಸ್ಟೇಟಿನ ಮುದ್ಗಲ್ಲ ಗ್ರಾಮ, ಗುಲ್ಬರ್ಗಾ ಗ್ರಾಮ, ಸೊಲ್ಲಾಪುರ, ವಿಜಾಪುರ ಜಿಲ್ಲೆಯ ಅಮಿನಾಗಡ ಗ್ರಾಮ, ಗುಳ್ಳೇದಗುಡ್ಡ ಗ್ರಾಮ, ರಬಕವಿ ಗ್ರಾಮ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಹೆಬ್ಬಳ್ಲಿ, ಗದಗ ಬೆಟಗೇರಿ, ಉಪ್ಪಿನ ಬೆಟಗೇರಿ, ಮಲರಸವ; ಬೆಳಗಾಂವ ಜಿಲ್ಲೆಯ ಬೈಲಹೊಂಗಲ, ದೇಶನೂರ, ವಡಗಾಂವ, ಮುರಗೋಡ ಇವುಗಳಲ್ಲಿ ಸಿಕ್ಕಿದ ಸುಮಾರು 25ಕ್ಕಿಂತಲೂ ಹೆಚ್ಚಿನ ಪ್ರತಿಗಳನ್ನು ಓದಿ ನೋಡಿದ್ದೇನೆ.
ಇವುಗಳಲ್ಲಿ ಕೆಲವು ತಾಡ ಓಲೆಗಳ ಮೇಲೆ, ಕೆಲವು ಕೋರಿ ಕಾಗದಗಳ ಮೇಲೆ, ಕೆಲವು ಬಿಳೇ ಕಾಗದಗಳ ಮೇಲೆ ಬರೆಲ್ಪಟ್ಟವುಗಳಾಗಿವೆ. ಇವುಗಳನ್ನೆಲ್ಲ ನಾವು ನೋಡುತ್ತಿರುವಾಗ ಅಲ್ಪ ಸ್ವಲ್ಪ ಬದಲಾವಣೆಯಲ್ಲಿ ಎಲ್ಲವೂ ಒಂದೇ ಮಾದರಿಯುಳ್ಳವುಗಳಾಗಿವೆ. ಈ ಪುರಾಣದಲ್ಲಿ ಹೇಳಿದ ಸಾರಾಂಶವಿಷ್ಟೆ.
ಪೂರ್ವ ಕಾಲದಲ್ಲಿ ತಾರಕಾಸುರನೆಂಬ ಧೈತ್ಯ ರಾಜನಿದ್ದನು. ಆತನು ಘೋರತರವಾದ ತಪಸ್ಸನ್ನು ಮಾಡಿ ಪರಮಾತ್ಮನನ್ನು ಒಲಿಸಿಕೊಂಡು ತನಗೆ ಯಾರಿಂದಲೂ ಮರಣವಾಗದಂಥ ವರವನ್ನು ಪಡೆದುಕೊಂಡು ಮುಂದೆ ಮದೋನ್ಮತ್ತನಾಗಿ ರಾಜ್ಯವಾಳ ಹತ್ತಿದನು. ಈತನ ಉಪಟಳದಿಂದ ದೇವತೆಗಳು ಬೆಂದು ಬೆಂಡಾಗಿ ಗೋಳಾಡುತ್ತಾ ತಮಗಾಗುತ್ತಿರುವ ಸಂಕಟಗಳನ್ನೆಲ್ಲಾ ಪರಮಾತ್ಮನ ಮುಂದೆ ದೂರಿಕೊಂಡರು. ಆಗ ಶಿವನು ಅವರ ಮೊರೆಯನ್ನು ಕೇಳಿ ತನ್ನ ದಿವ್ಯ ಮಹಾಮಂತ್ರ ಶಕ್ತಿಯಿಂದ ನೀಲಕಂಠರುದ್ರ, ಅಭಗತರುದ್ರ, ಅನಾಮಯರುದ್ರ, ಭರ್ಗೋದೇವರುದ್ರ, ವಿರೂಪಾಕ್ಷರುದ್ರ, ಮುಂತಾದ ತನ್ನ ಹೆಸರಿನ 66ರುದ್ರರನ್ನು ನಿರ್ಮಿಸಿ ಅವರ ಕಡೆಯಿಂದ ತಾರಕಾಸುರನ ಬೆಂಬಲರಾಗಿರುವ ಧೈತ್ಯ ಶ್ರೇಷ್ಠರನ್ನೆಲ್ಲ ನಾಶಪಡೆಸಿದನಲ್ಲದೆ ಮುಂದೆ ತಾರಕಾಸುರನನ್ನು ಷಣ್ಮುಖನಿಂದ ಸಂಹಾರಗೊಳಿಸಿದನು. ಈ 66ರುದ್ರರಿಂದ ಮುಂದೆ 66 ಗೋತ್ರಗಳು ಉತ್ಪನ್ನವಾದವು. ಆ ಗೋತ್ರಗಳ ವಂಶಿಕರೇ ಕುರುಹಿನ ಶೆಟ್ಟಿಗಳು.
ಇವರ ತಾಯಿ ಪಾರ್ವತಿ, ತಂದೆ ಪರಮೇಶ್ವರ, ಬಂಧು ಬಂಧು ಬಳಗ ಅಸಂಖ್ಯಾತ ಶಿವಗಣಂಗಳು , ಇವರ ಕುಲಸ್ವಾಮಿ ನೀಲಕಂಠ ಮಲ್ಲಿಕಾರ್ಜುನ ಲಿಂಗವು. ಇವರು ಇಷ್ಟ ಲಿಂಗ ಧಾರಕರು, ವೀರಶೈವಾಚಾರ ನಿರತರು, ಷಟಸ್ಥಲ - ಪಂಚಚಾರ ಪ್ರಿಯರು, ಶಿವಶಕ್ತಿ ಸಂಪನ್ನರು, ಅಹಿಂಸಾ ಧರ್ಮ ಪ್ರತಿ ಚಾಲಕರು ಇತ್ಯಾದಿಯಾಗಿ ಹೇಳಲಿರುವುದರಿಂದ ಕುರುಹಿನಶೆಟ್ಟಿಗಳಿಗೆ ವೀರಶೈವ ಧರ್ಮವೇ ಪ್ರಾಧಾನ್ಯವಾದುದೆಂದು ಸಹಜವೇ ಕಂಡು ಬರುವುದು. ಆದರೆ ಕೆಲ ಕೆಲವರು ಹೀರೆ ಕುರುಹಿನವರೆಂಬುವರು ಬಸವನ ಕಾಲದಲ್ಲಿ ಲಿಂಗ ಧಾರಣ ಹೊಂದಿ ವೀರಶೈವರಾದರೆಂದು ಹೇಳುತ್ತಾರಂತೆ. ಇವರ ಈ ಜೊಳ್ಳು ಮಾತಿನಲ್ಲಿ ಎನೂ ಹುರುಳಿಲ್ಲ. ಯಾಕಂದರೆ, ಬಸವಪುರಾಣ, ಚೆನ್ನಬಸವ ಪುರಾಣ, ಪ್ರಭುಲಿಂಗ ಲೀಲೆ, ಚೋರಬಸವ ಪುರಾಣ, ಶರಣ ಲೀಲಾಮೃತ, ಶಿಂಗಿರಾಜ ಪುರಾಣ, ಬಸವ ಚರಿತ್ರೆ ಮೊದಲಾದ ಗ್ರಂಥಗಳ ಪುಟಗಳನೆಲ್ಲ ಒಂದೂ ಬಿಡದೆ ತಿರುವಿ ಹಾಕಿದರೂ ಎಲ್ಲಿಯೂ ಈ ಮಾತು ಬಂದಿಲ್ಲ ಅಷ್ಟೇಕೆ ಬಸವಣ್ಣನವರ ಕಾಲದಲ್ಲಿ ಒಳ್ಳೇ ಶಿವಶರಣೆಂದು ಪ್ರಖ್ಯಾತಿಯನ್ನು ಹೊಂದಿದ ಹೋಳಿ ಹಂಪಯ್ಯನ ಚರಿತ್ರೆಯನ್ನಾಗಲಿ ಓದಿ ನೋಡಿದರೆ ಇವರ ತರ್ಕವು ವ್ಯರ್ಥವಾಗದಿರದು. ಇವರೀರ್ವರೂ ವೀರಶೈವ ಕುರುಹಿನಶೆಟ್ಟಿ ಜಾತಿಯಲ್ಲಿ ಜನಿಸಿದ ವ್ಯಕ್ತಿಗಳಿರುವರು. ಇವರು ಪುರಾಣ ಪುರಷರಷ್ಟೆ ಅಲ್ಲ; ಇವರ ಬಗ್ಗೆ ಶಿಲಾ ಶಾಸನಗಳೂ ಉಂಟು. ಇವರ ಹೊರ್ತಾಗಿ ಇದೇ ವಿಷಯವನ್ನು ಕುರಿತು ಇನ್ನೂ ಕೆಲವು ಉದಾಹರಣೆಗಳನ್ನು ಕೊಡಬಹುದು. ಆದರೆ ಲೇಖನವು ವಿಸ್ತಾರವಾಗುತ್ತಾ ಹೋಗುವುದರಿಂದ ಇಷ್ಟಕ್ಕೇನೇ ಕೈ ಬಿಗಿ ಹಿಡಿದು ಲೇಖಣಿಯನ್ನು ಕೆಳಗಿಡುತ್ತೇನೆ.
For Enquiries Contact us